ಹಿಂಗಿಸ್, ಮಾರ್ಟಿನಾ
 	1980-. ಪ್ರಸಿದ್ಧ ಟೆನಿಸ್ ಆಟಗಾರ್ತಿ. ಸ್ವಿಟ್ಕರ್ಲೆಂಡಿನ ಸೊಲ್ವಾಕಿಯದ ಕೊಸೈಸ್‍ನಲ್ಲಿ (ಆಗ ಚೆಕೊಸ್ಲೊವಾಕಿಯದ ಭಾಗವಾಗಿತ್ತು) 1980 ಸೆಪ್ಟೆಂಬರ್ 30ರಂದು ಜನಿಸಿದಳು. ತಂದೆ ಕರೋಲ್ ಹಿಂಗಿಸ್ ಮೆಕ್ಯಾನಿಕ್ ಹಾಗೂ ಟೆನಿಸ್ ಅಭಿಮಾನಿ. ತಾಯಿ ಮೋನಿಕಾ ಮೊಲಿಟರ್ ರಾಜ್ನೊವ್‍ನ ರ್ಯಾಂಕ್ ಪಡೆದ ಟೆನಿಸ್ ಆಟಗಾರ್ತಿ. ಈ ದಂಪತಿಗಳ ಏಕೈಕ ಪುತ್ರಿ ಹಿಂಗಿಸ್. ಪ್ರಸಿದ್ಧ ಆಟಗಾರ್ತಿ ಮಾರ್ಟಿನ ನವ್ರಾತಿಲೋವಳಿಂದ ಪ್ರೇರಣೆ ಪಡೆದ ಈಕೆ 5 ಗ್ರಾಂಡ್‍ಸ್ಲಾಂ ಸಿಂಗಲ್ಸ್ ಹಾಗೂ ಬಹುಮಾನದ ಹಣವಾಗಿ 17 ಮಿಲಿಯನ್ ಡಾಲರ್ ಗಳಿಸಿ ಪ್ರಪಂಚದ ಅತ್ಯುತ್ತಮ ಟೆನಿಸ್ ಆಟಗಾರ್ತಿಯೆನಿಸಿದಳು (1997). 	 

	ಈಕೆ ತನ್ನ 2ನೆಯ ವಯಸ್ಸಿನಲ್ಲಿಯೇ ಟೆನಿಸ್ ರ್ಯಾಕೆಟ್ ಹಿಡಿದಳು. 3ನೆಯ ವರ್ಷಕ್ಕೆ ಕೋರ್ಟ್‍ನಲ್ಲೆ ಆಡಲಾರಂಭಿಸಿದಳು. 4ನೆಯ ವರ್ಷಕ್ಕೆ ಮೊದಲ ಟೂರ್ನಮೆಂಟ್ ಆಡಿ ಸೋತಳು. ಈ ಮಧ್ಯೆ ತಂದೆ ತಾಯಿಯರು ವಿಚ್ಛೇದನ ಪಡೆದರು. ಇವಳಿಗೆ ಆಗ 3 ವರ್ಷ ವಯಸ್ಸು. ತಾಯಿಯೇ ಈಕೆಯ ಕೋಚ್ ಕೂಡಾ ಆದಳು. 7ನೆಯ ವಯಸ್ಸಿನಲ್ಲಿ ಬಲಗೈ ಬೆರಳುಗಾಯವಾಗಿದ್ದ ಕಾರಣ ಎಡಗೈನಲ್ಲೇ ರ್ಯಾಕೆಟ್ ಹಿಡಿದು ಒಂದು ಟೂರ್ನ್‍ಮೆಂಟ್‍ನಲ್ಲಿ ಆಡಿ ಗೆದ್ದಳು. 9ನೆಯ ವರ್ಷದಿಂದ ಆರಂಭಿಸಿ 14ವರ್ಷ ವಯಸ್ಸಿನ ತನಕ ಅಂತಾರಾಷ್ಟ್ರೀಯ ಟೂರ್ನಮೆಂಟ್‍ಗಳಲ್ಲಿ ಭಾಗವಹಿಸಿದಳು. ತರುವಾಯ ವೃತ್ತಿನಿರತ ಆಟಗಾರ್ತಿಯಾದಳು (1994). ವಿಂಬಲ್ಡನ್‍ನಲ್ಲಿ ಜಯಗಳಿಸಿದ ಅತಿ ಕಿರಿಯ ಆಟಗಾರ್ತಿಯೆನಿಸಿ ದಳು (1996). ರ್ಯಾಂಕಿಂಗ್‍ನಲ್ಲಿ ನಾಲ್ಕನೆಯ ಸ್ಥಾನ ಪಡೆದಳು. 20ನೆಯ ಶತಮಾನದಲ್ಲಿ ಗ್ರಾಂಡ್‍ಸ್ಲಾಂ ಹಾಗೂ ನಂ. 1 ರ್ಯಾಂಕ್  ಗಳಿಸಿದವರಲ್ಲಿ ಈಕೆ ಅತಿ ಕಿರಿಯಳು (1997). ಗ್ರಾಂಡ್‍ಸ್ಲಾಂ ಉಳಿಸಿಕೊಂಡವರಲ್ಲಿ ಅತಿ ಕಿರಿಯಳು (1998). ಸಿಂಗಲ್ಸ್‍ನಲ್ಲಿ ನಂ. 2 ಮತ್ತು ಡಬಲ್ಸ್‍ನಲ್ಲಿ ನಂ. 1 ಎನಿಸಿದಳು. ಕ್ರಮೇಣ ಇವಳ ರ್ಯಾಂಕಿಂಗ್ ಇಳಿಯ ತೊಡಗಿ ಅದು 2002ರಲ್ಲಿ ನಂ. 11 ಆಯಿತು. ಆಟೋ ನ್ಯಾಗಿಂಗ್ ಮತ್ತು ಗಾಯಗೊಂಡಕಾರಣಕ್ಕಾಗಿ ಆಸ್ಟ್ರೇಲಿಯನ್ ಓಪನ್‍ನಲ್ಲಿ ಆಡದೇ ಉಳಿದಳು (2003). ಇವಳು ಆಡಿದ 65 ಪಂದ್ಯಗಳಲ್ಲಿ 63 ಪಂದ್ಯಗಳನ್ನು ಗೆದ್ದು ದಾಖಲೆ ನಿರ್ಮಿಸಿದ್ದಾಳೆ.									
		(ಡಿ.ಎನ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ